ಕೌಕ್ರಾಡಿ:ಪಟ್ಲಡ್ಕದಲ್ಲಿ ಮೊಗೇರ್ಕಳ ನೇಮೋತ್ಸವ: ದೈವಗಳ ಆರಾಧನೆಯಿಂದ ಸನಾತನ ಸಂಸ್ಕೃತಿ ಉಳಿಯುಲಿದೆ-ಒಡಿಯೂರು ಶ್ರೀ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್, ಕೌಕ್ರಾಡಿ :ದೈವಗಳ ಆರಾಧನೆಯಿಂದ ಸನಾತನ ಸಂಸ್ಕೃತಿ ಉಳಿಯುಲಿದೆ, ಈ ನಿಟ್ಟಿನಲ್ಲಿ ಯುವ ಸಮುದಾಯ ಸತ್ಕಾರ್ಯ ಮತ್ತು ಧರ್ಮದ ಅನುಷ್ಠಾನ ಮಾಡಿ ಧರ್ಮ ಸಂಸ್ಕೃತಿಯನ್ನು ಉಳಿಸಬೇಕು ಎಂದು ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಜಿ ಹೇಳಿದರು.  ಅವರು ಫೆಬ್ರವರಿ 13 ರಂದು ಕೌಕ್ರಾಡಿ ಗ್ರಾಮದ ಪಟ್ಲಡ್ಕ ಸ್ವಾಮಿ ಕೊರಗಜ್ಜ, ಬ್ರಹ್ಮ ಮುಗೇರ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ  ಆಶೀರ್ವಚನ ನೀಡಿ, ಕಾಲ ಪರಿವರ್ತನೆಯ ಅಂಚಿನಲ್ಲಿರುವ ಈ ದಿನಗಳಲ್ಲಿ ಸಂಸ್ಕೃತಿ ಸಂಸ್ಕಾರದ ಜ್ಯೋತಿ ಬೆಳಗುವ ಮೂಲಕ ಆತ್ಮ ಜ್ಯೋತಿಯ ಸಾಕ್ಷತ್ಕಾರವಾಗಿಸಬೇಕೆಂದರು.

ಉದ್ಯಮಿ ಕುಶಾಲಪ್ಪ ಗೌಡ ಪೂವಾಜೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ತುಳುನಾಡಿನ ಕಾರ್ನಿಕದ ಆರಾಧ್ಯ ದೈವ,  ಮುಗೇರ್ಕಳ ಮತ್ತು ಕೊರಗ ದೈವದ ಜೀರ್ಣೋದ್ದಾರ ಕಾರ್ಯ ಪುಣ್ಯದ ಕೆಲಸವಾಗಿದ್ದು ಇಂತಹ ಕಾರ್ಯದಲ್ಲಿ ಭಾಗಿಗಳಾಗುವುದೇ ದೊಡ್ಡ ಭಾಗ್ಯವೆಂದರರು. ಪಟ್ಲಡ್ಕ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್‍ನ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಧಾರ್ಮಿಕ ಉಪನ್ಯಾಸವನ್ನು ಕೊಕ್ಕಡ ಸ.ಪ.ಪೂ. ಕಾಲೇಜಿನ ಉಪನ್ಯಾಸಕ ವಿಶ್ವನಾಥ ರೈ ಪೆರ್ಲ ನೀಡಿದರು.

ಮುಖ್ಯ ಅತಿಥಿಗಳಾಗಿ ಬಂಟ್ವಾಳ  ಉಪ ತಹಸೀಲ್ದಾರ್ ಶ್ರೀಧರ ಕೋಡಿಜಾಲ್,  ಕ್ಯಾನ್ಸರ್ ತಜ್ಞ ಡಾ| ರಘು, ಹಿರಿಯ ವೈದ್ಯ ಡಾ| ಮೋಹನದಾಸ ಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಕೆ. ಇಬ್ರಾಹಿಂ, ತಾ.ಪಂ  ಸದಸ್ಯೆ ಉಷಾ ಅಂಚನ್ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್ ಹಾಗೂ  ದಾನಿ ಸಂಕಪ್ಪ ಅವರನ್ನು ಸನ್ಮಾನಿಸಲಾಯಿತು.  ಬಳಿಕ ದಯಾನಂದ ಕತ್ತಲ್‍ಸರ್ ಹಾಗೂ ತಂಡದವರಿಂದ ತುಳುನಾಡ ವೈಭವ ಪ್ರದರ್ಶನ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಕಡಬ ಟೈಮ್ಸ್ ಸುದ್ದಿ ಹಂಚಿರಿ