ಸಂಪಾದಕೀಯ:ರಾಜ್ಯ ಸಚಿವ ಸಂಪುಟದಲ್ಲಿ ಪಕ್ಷಾಂತರಿಗಳು ಸಚಿವರಾದರು,ಆರು ಬಾರಿ ಗೆದ್ದ ಅಂಗಾರರು ಮಾತ್ರ ಶಾಸಕರಾಗಿಯೇ ಉಳಿದುಬಿಟ್ಟರು!

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್,(ಸಂಪಾದಕೀಯ-ವಿ.ಕೆ ಕಡಬ ):  ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆಯ ಸುದ್ದಿ ಕೇಳಿಬಂದಾಗಲೆಲ್ಲ  ಸುಳ್ಯ ವಿಧಾನ ಸಭಾ ಕ್ಷೇತ್ರದ   ಶಾಸಕ ಎಸ್. ಅಂಗಾರ ಅವರ ಹೆಸರು   ಆಗಾಗ ಕೇಳಿಬರುವುದು ಸಾಮಾನ್ಯ.  ಮೊನ್ನೆ ನೆಡೆದ ಸಚಿವ ಸಂಪುಟ ಪುನರಚನೆಯ ವೇಳೆಯೂ   ಸಚಿವರಾಗುವ ಸಂಭಾವ್ಯರಲ್ಲಿ ಮತ್ತೆ ಸುಳ್ಯ ಶಾಸಕಕರ  ಹೆಸರು ಚಾಲ್ತಿಗೆ ಬಂದಿತ್ತು. ಆದರೆ ಮೊನ್ನೆಯಷ್ಟೇ ಬಿಜೆಪಿಗೆ  ಸೇರ್ಪಡೆಗೊಂಡ ಕಾಂಗ್ರೆಸಿಗರಿಗೆ ಸಚಿವ ಸ್ಥಾನ ಒದಗಿದ್ದು, ಅಂಗಾರರು  ಇನ್ನೂ ಶಾಸಕರಾಗಿಯೇ ಉಳಿದಿದ್ದಾರೆ!

1994 ರಿಂದ ಸತತವಾಗಿ ಗೆಲ್ಲುತ್ತಲೇ ಬರುತ್ತಿರುವ  ಬಿಜೆಪಿ ಯ ಎಸ್.  ಅಂಗಾರರು ಇದೀಗ ಆರನೇ ಬಾರಿ ಗೆದ್ದಿದ್ದರೂ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಗಿರಿ ನೀಡಲು ಸಾಧ್ಯವಾಗಿಲ್ಲ.   ಅಂಗಾರಾರು  ಮೂರನೇ ಬಾರಿ ಗೆದ್ದಾಗ ಮತ್ತು ನಾಲ್ಕನೆ  ಬಾರಿ ಗೆದ್ದಾಗಲೂ  ರಾಜ್ಯದಲ್ಲಿ ಬಿಜೆಪಿ  ಅಧಿಕಾರ ಹಿಡಿದರೂ ಮಂತ್ರಿಗಿರಿಗಾಗಿ ಬೇಡಿಕೆ  ಮುಂದಿಟ್ಟವರಲ್ಲ.  ತನಗಿಂತ ಕಡಿಮೆ ಅವಧಿಯ ಶಾಸಕರನ್ನು ಮಂತ್ರಿ ಮಾಡಿ  -ಸೀನಿಯರ್ ಆದ  ತನ್ನನ್ನು ಪರಿಗಣಿಸದಿರುವಾಗ ಆಕ್ಷೇಪವನ್ನೂ ಮಾಡಿದವರಲ್ಲ.   ಅಂಗಾರರ ನಾಲ್ಕನೇ ಅವಧಿಯಲ್ಲಿ ಬಿಜೆಪಿ  ಪೂರ್ಣ ಪ್ರಮಾಣದ ಸರಕಾರ ರಚಿಸಿದಾಗಲೂ ಎರಡನೇ ಬಾರಿ ಶಾಸಕರಾಗಿದ್ದ ಸುರತ್ಕಲ್‌ನ ಕೃಷ್ಣ ಪಾಲೆಮಾರ್‌ರಿಗೆ  ಮಂತ್ರಿಯಾಗುವ ಅವಕಾಶ ದೊರೆಯಿತೇ ವಿನಃ ಸುಳ್ಯ ವಿಧಾನ ಸಭಾ ಕ್ಷೇತ್ರದ ಜನಮೆಚ್ಚಿದ ನಾಯಕ  ಅಂಗಾರರಿಗೆ ದೊರೆಯಲಿಲ್ಲ.   ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದಾಗ ಸುಳ್ಯದ ಬಿಜೆಪಿ ನಿಯೋಗ ಆಗಿನ ಮಂಡಲಾಧ್ಯಕ್ಷ ವೆಂಕಟ್ ದಂಬೆಕೋಡಿಯವರ ನೇತೃತ್ವದಲ್ಲಿ  ಬೆಂಗಳೂರಿಗೆ ಹೋಗಿ ಸುಳ್ಯ ಶಾಸಕ ಅಂಗಾರರಿಗೆ ಮಂತ್ರಿ ಸ್ಥಾನ ಕೊಡಲೇ ಬೇಕೆಂದು ಒತ್ತಾಯಿಸಿದ್ದರು. ಆದರೆ ಫಲ ದೊರೆತಿರಲಿಲ್ಲ.

201 3ರಲ್ಲಿ ದ.ಕ.ಜಿಲ್ಲೆಯ ಇತರ ಎಲ್ಲಾ 7 ಸ್ಥಾನಗಳಲ್ಲಿ ಬಿಜೆಪಿ ಸೋತು, ಸುಳ್ಯದಲ್ಲಿ ಮಾತ್ರ ಶಾಸಕ ಅಂಗಾರರು ಗೆಲುವಿನ ಓಟವನ್ನು ಮುಂದುವರಿಸಿ,  ಜಿಲ್ಲೆಗೊಬ್ಬರೇ ಬಿಜೆಪಿ ಶಾಸಕರಾದುದರಿಂದ ‘ಅಂಗಾರರು ಹಿರಿಯರು, ಅವರು ಸಚಿವರಾಗಬೇಕು’ ಎಂಬ ಮಾತು ಬಿಜೆಪಿ  ನಾಯಕರ ಬಾಯಿಂದ ಬರತೊಡಗಿತು  ಚುನಾವಣಾ ಪ್ರಚಾರದ ವೇಳೆಯೂ   ಬಿಜೆಪಿ ಅಧಿಕಾರಕ್ಕೆ ಬಂದರೆ ಅಂಗಾರರೇ ಮಂತ್ರಿಯಾಗುತ್ತಾರೆ  ಎಂಬ ನಿರ್ಧಾರ ಗಟ್ಟಿಯಾಗಿ ಕೇಳಿ ಬಂದಿತ್ತು. ಚುನಾವಣಾ ಪ್ರಚಾರದ ವೇಳೆ  ಮಂಗಳೂರು, ಪುತ್ತೂರುಗಳಿಗೂ  ಅಂಗಾರರನ್ನು  ಪ್ರಚಾರಕ್ಕೆ ಕರೆಸಿಕೊಳ್ಳುವ ವ್ಯವಸ್ಥೆಯನ್ನು ಬಿಜೆಪಿ ಪಕ್ಷ ಮಾಡಿತು

. ಈ ಬಾರಿಯೂ  ಸಚಿವ ಸ್ಥಾನ ಸಿಗದ ಬಗ್ಗೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮುಖಂಡರಲ್ಲಿ  ಅಸಮಾಧಾನ ಇರುವುದಂತು ಸತ್ಯ.  ಕಳೆದ ಬಾರಿ ಸರ್ಕಾರ ರಚನೆಯ  ವೇಳೆ  ಬೆಳಗಾಗುವಷ್ಟರಲ್ಲಿ ಸಚಿವ ಸ್ಥಾನದಿಂದ ವಂಚಿತರನ್ನಾಗಿಸಿದ್ದು  ಸುಳ್ಯಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಬಿಜೆಪಿ  ಮುಖಂಡರು ಅಸಮಾಧಾನ ಹೊರಹಾಕಿದರು. ಸಭೆಯಲ್ಲಿ ಅಸಮಾಧಾನಗೊಂಡ ಬಿಜೆಪಿ ಮುಖಂಡರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಯಾವುದೇ ಆತುರದ ನಿರ್ಧಾರ ಕೈಗೊಳ್ಳಬೇಡಿ ಎಂದು ಸಮಾಧಾನ ಪಡಿಸಿದ್ದರು.

ಜಿಲ್ಲೆಯ ಏಳು ಮಂದಿ ಶಾಸಕರ ಪೈಕಿ  ಹಿರಿಯರೂ ಅನುಭವಿಗಳೂ ಆಗಿರುವ ಅಂಗಾರರು  ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ  ಬಲಿಷ್ಟ ಬಿಜೆಪಿ ಪಡೆಯನ್ನು ಹೊಂದಿದ್ದಾರೆ. ಹೀಗಾಗಿ ಮೂಲ ಬಿಜೆಪಿಗರ ಪಟ್ಟಿಯಲ್ಲಿ ಅಂಗಾರರಿಗೆ ಈ ಬಾರಿ ಅದೃಷ್ಟ ಖುಲಾಯಿಸಬಹುದು   ಎಂಬ ನಿರೀಕ್ಷೆ ಕಾರ್ಯಕರ್ತರಲ್ಲಿಯೂ ಇತ್ತು.  ಇದಕ್ಕೆ ಪೂರಕ ಎಂಬಂತೆ  ರಾಜ್ಯದ ಮಾಧ್ಯಮಗಳು ವರದಿಯನ್ನೂ ಬಿತ್ತರಿಸಿದ್ದವು  . ಮಾಧ್ಯಮದ ಜೊತೆ ಮಾತನಾಡಿದ ಶಾಸಕರೂ   ನನ್ನ ಪರವಾಗಿ ಈಗಾಗಲೇ ಪಕ್ಷದ ಮುಖಂಡರು ಮುಖ್ಯಮಂತ್ರಿಗಳನ್ನು  ಮತ್ತು ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದಾರೆ.   ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ. ಆದರೆ ಸಿಗದೇ ಇದ್ದರೂ ಪಕ್ಷದ್ರೋಹದ ಕೆಲಸ ಮಾಡುವುದಿಲ್ಲ.  ಅಂಗಾರ  ಏನು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ನಿಷ್ಕಲ್ಮಶ ಮನಸಿನಿಂದ  ಪ್ರತಿಕ್ರಿಯಿಸಿದ್ದರು.

ಪಕ್ಷದ ನಿಯಮಗಳಿಗೆ ಬದ್ದರಾಗಿರುವ ಅಂಗಾರರು   ಸಚಿವ ಸ್ಥಾನದ ಬಗ್ಗೆ ಹೆಚ್ಚು ಒಲವು ಇದ್ದಂತೆ ಕಾಣುವುದಿಲ್ಲ,  ಹಾಗೆಂದು ಸಚಿವ ಸ್ಥಾನ ಸಿಕ್ಕರೆ ಬೇಡ ಎನ್ನುವುದಿಲ್ಲ.  ಈ ನಡುವೆ  ಜಾತಿ ಆಧಾರಿಸಿ  ಅಂಗಾರಾರಿಗೆ ಮಂತ್ರಿಸ್ಥಾನ ನೀಡಲಿಲ್ಲ ಇದು ಮೊಗೇರ ಸಮುದಾಯಕ್ಕೆ ಅನ್ಯಾಯ ಎಂಬ ಅಭಿಪ್ರಾಯವೂ ಇದೆ .ಈ ಬಾರಿಯ ಚುನಾವಣೆಯಲ್ಲಿ 26 ಸಾವಿರ ಮತಗಳ ಅಂತರದಿಂದ ಗೆದ್ದು ಸತತ 6 ನೇ ಬಾರಿ ವಿಧಾನಸಭೆ ಪ್ರವೇಶಿಸಿದ ಕೆಲವೇ ಕೆಲವು ಜನರ ಸಾಲಲ್ಲಿ ನಿಂತಂತಹ ಅಂಗಾರರು ಮಂತ್ರಿಯಾದೆ  ಶಾಸಕರಾಗಿಯೇ ಉಳಿದು ಬಿಟ್ಟಿದ್ದಾರೆ . ಏನಿದ್ದರೂ ಸುಳ್ಯ ವಿಧಾನ ಸಭಾಕ್ಷೇತ್ರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಅನ್ಯಾಯ ಎಸಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.


ಕಡಬ ಟೈಮ್ಸ್ ಸುದ್ದಿ ಹಂಚಿರಿ