ಬೆಳ್ತಂಗಡಿ:ಗಾಂಧಿ ವಿರೋಧಿ ಹೇಳಿಕೆಗೆ ಪ್ರತಿಭಟನೆ , ಅನಂತ ಕುಮಾರ್ ಹೆಗ್ಡೆ ಪೋಟೋ ಗೆ ಬೆಂಕಿ ಹಚ್ಚಿ ಆಕ್ರೋಶ!

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್,ಬೆಳ್ತಂಗಡಿ: ಮಹಾತ್ಮ ಗಾಂಧಿಯವರ ಕುರಿತಂತೆ ಬಿಜೆಪಿ ಸಂಸದ ಅನಂತ ಕುಮಾರ್ ಹೆಗ್ಡೆ ನೀಡಿರುವ ಹೇಳಿಕೆ  ಮಂಗಳವಾರ ಲೋಕ ಸಭೆಯಲ್ಲಿ ಬಾರೀ ಗದ್ದಲ ಎದ್ದಿರುವ ಬೆನ್ನಲ್ಲೇ ಇತ್ತ ಬೆಳ್ತಂಗಡಿಯಲ್ಲೂ ಪ್ರತಿಭಟನೆ ನಡೆದಿದೆ.

 ಮಂಗಳವಾರ ಸಂಜೆ  ಬೆಳ್ತಂಗಡಿ  ಬಸ್ ನಿಲ್ದಾಣದ ಬಳಿ  ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು,  ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ  ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ , ನ್ಯಾಯವಾದಿ ಶಿವಕುಮಾರ್ ಎಸ್. ಎಂ ಅವರು,  ಅನಂತ ಕುಮಾರ್ ಹೆಗ್ಡೆ ಮಾನಸಿಕ  ಅಸ್ವಸ್ಥರಂತೆ ಮಾತನಾಡುವ ಮೂಲಕ ದೇಶವನ್ನು ವಿಭಜಿಸಲು ಹೊರಟಿದ್ದಾರೆ.  ಸಂವಿಧಾನ ಬದಲಾವಣೆ ಸೇರಿದಂತೆ ಹಲವಾರು  ವರ್ಷಗಳಿಂದ ದೇಶದ್ರೋಹಿ ಹೇಳಿಕೆ ನೀಡುತ್ತಿರುವ  ಅನಂತ ಕುಮಾರ್ ಹೆಗ್ಡೆಯನ್ನು ದೇಶದ್ರೋಹಿ  ಕಾನೂನಿನಡಿ ಜೈಲಿಗಟ್ಟಬೇಕು ಎಂದು ಒತ್ತಾಯಿಸಿದರು.

 ಬಿಜೆಪಿಯಲ್ಲಿ ದೇಶದ್ರೋಹಿ ಹೇಳಿಕೆ ನೀಡುವ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು , ಇದು ಆ ಪಕ್ಷದ ಮನಸ್ಥಿತಿಗೆ ಸಾಕ್ಷಿ ಎಂದರು.  ದೇಶದ ಸ್ವಾತಂತ್ರ್ಯ ಹೋರಾಟ ಹಾಗೂ ನೇತೃತ್ವ ವಹಿಸಿದ್ದ ಮಹಾತ್ಮ ಗಾಂಧಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹೆಗ್ಡೆಯ ಸಂಸತ್ ಸದಸ್ಯತ್ವವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಸಂಸದ ಅನಂತ ಕುಮಾರ್ ಹೆಗ್ಡೆಯ ಪೋಟೋ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ  ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮನೋಹರ ಇಳಂತಿಲ , ದಯಾಳ್ ಬಾಗ್ ಸಂಸ್ಥೆಯ ಮುಖ್ಯಸ್ಥ ವಿನೋದ್ ಮಸ್ಕರೇನಸ್  , ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ , ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ  ಚಂದು ಎಲ್,  ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಎಸ್ಡಿಪಿಐ ತಾಲೂಕು ಅಧ್ಯಕ್ಷ ನವಾಜ್ ಶರೀಫ್ ಕಟ್ಟೆ  ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಅನಿಲ್ ಪೈ , ನಳಿಕೆ ಸಮಾಜದ ಅಧ್ಯಕ್ಷ ಪ್ರಭಾಕರ್ , ನ್ಯಾಯವಾದಿ ಸೇವಿಯರ್  ಪಾಲೇಲಿ , ಅರುಣ್ ಕರಂಬಾರು , ಸಿಪಿಐ(ಎಂ) ಮುಖಂಡ ಶೇಖರ್ ಎಲ್ ಉಪಸ್ಥಿತರಿದ್ದರು.


ಕಡಬ ಟೈಮ್ಸ್ ಸುದ್ದಿ ಹಂಚಿರಿ