ಕುಟ್ರುಪಾಡಿ:ನಕಲಿ ಸಹಿ ಪಡೆದ ದೂರುನ್ನು ಆಧಾರಿಸಿ ನಿಯಮ ಮೀರಿ ನಿರ್ಣಯ ಮಾಡಲಾಗಿದೆ- ಆಶಾ ಕಾರ್ಯಕರ್ತೆ ಜಯಶ್ರೀ ಆರೋಪ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕುಟ್ರುಪಾಡಿ ಗ್ರಾಮ ಪಂಚಾಯತ್ ಮಾಡಿದ ನಿರ್ಣಯವನ್ನು ರದ್ದುಗೊಳಿಸದಿದ್ದರೆ ಪಂಚಾಯತ್ ಎದುರು ಪ್ರತಿಭಟನೆ  – ಸೇಸಪ್ಪ ಬೆದ್ರಕಾಡು

ಕಡಬ ಟೈಮ್ಸ್, ಪಟ್ಟಣ ಸುದ್ದಿ:ನಾನು ಕುಟ್ರುಪ್ಪಾಡಿ ಗ್ರಾಮದ ವಾಳ್ಯ, ಉಳಿಪ್ಪು, ಅಲರ್ಮೆ, ಓಣಿಬಾಗಿಲು, ಪಣೆಮಜಲು ಅಮೈ ವ್ಯಾಪ್ತಿಯಲ್ಲಿ ಅಶಾ ಕಾರ್ಯಕರ್ತೆಯಾಗಿದ್ದು ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿ ಅಶಾ ಕಾರ್ಯಕರ್ತೆ ಸೇವೆಯಿಂದ ತೆಗೆಯುವಂತೆ ಕುಟ್ರುಪ್ಪಾಡಿ ಮಹಿಳಾ ಗ್ರಾಮ ಸಭೆಯಲ್ಲಿ ನಿಯಮ ಮೀರಿ ನಿರ್ಣಯ ಮಾಡಲಾಗಿದೆ  ಎಂದು ಆಶಾಕಾರ್ಯಕರ್ತೆ ಜಯಶ್ರೀರವರು ಸೋಮವಾರ ಕಡಬದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಆರೋಪಿಸಿದರು.

ನಾನು   ಈ ಭಾಗದ ಎಲ್ಲರ ಮನೆಗಳಿಗೆ ಭೇಟಿ  ನೀಡಿ ನನಗೆ ಕೊಟ್ಟ ಕರ್ತವ್ಯ ಮಾಡುತ್ತಿದ್ದೇನೆ.ಮನೆಗಳಿಗೆ ಭೇಟಿ ನೀಡಿದ ಬಗ್ಗೆ  ದಾಖಲಾತಿ ಸಹಿಯೊಂದಿಗೆ ನಮ್ಮ ಆರೋಗ್ಯ ಇಲಾಖೆ ಪೂರ್ಣಪ್ರಮಾಣದ ದಾಖಲೆನೀಡುತ್ತಾ ಬರುತ್ತಿದೇನೆ .ನನ್ನ ವ್ಯಾಪ್ತಿಯ ಎಲ್ಲಾ ಮನೆಯವರೊಂದಿಗೂ ಅತ್ಮೀಯತೆಯಿಂದ ಇದ್ದು, ಯಾರು ನನ್ನ ಬಗ್ಗೆ ಯಾವುದೇ ದೂರನ್ನು ನನ್ನಲ್ಲೂ ಹೇಳಿರುವುದಿಲ್ಲ, ಯಾರಿಗೂ ದೂರು ನೀಡಿದ ಬಗ್ಗೆಯೂ ನನ್ನ ಗಮನಕ್ಕೂ ಬಂದಿರುವುದಿಲ್ಲ.ಇದೊಂದು ವ್ಯವಸ್ಥಿತಿತ ಸಂಚುರೂಪಿಸಿರುವುದಕ್ಕೆ ನನ್ನ ಬಳಿ ಮಾಹಿತಿ ಹಕ್ಕಿನಲ್ಲಿ ಪಡೆದುಕೊಂಡ ಮಾಹಿತಿಯೇ ಆಧಾರವಾಗಿದೆ ಎಂದು ವಿವರಿಸಿದರು.

ಕಳದೆ 15 ದಿನಗಳ ಹಿಂದೆ ನಮ್ಮ ಗ್ರಾಮದ ಹೊಸ್ಮಠದಲ್ಲಿರುವ ರವಿ ಎಂಬವರು ಅನಾವಶ್ಯಕ ಜಾತಿ ನಿಂದನೆ ಮಾಡಿದ ಬಗ್ಗೆ ಪೋಲೀಸ್ ಇಲಾಖೆಗೆ ದೂರು ನೀಡಿದ್ದೆ, ನಂತರದ ಬೆಳವಣಿಗೆಯಲ್ಲಿ ಕೆಲವರ  ಕುಮ್ಮಕಿನಿಂದ ಊರಿನವರ ನಕಲಿ  ಸಹಿಯೊಂದಿಗೆ ಪಂಚಾಯತ್ ನವರು ಅರ್ಜಿಪಡೆದುಕೊಂಡು ಹೇಗಾದರೂ ಮಾಡಿ  ನನ್ನನು ಅಶಾ ಕಾರ್ಯಕರ್ತೆ ಕೆಲಸದಿಂದ ತೆಗೆಯಬೇಕೆಂದು ಮಹಿಳಾ ಗ್ರಾಮಸಭೆಯಲ್ಲಿ ನಿರ್ಣಯ ಮಾಡಲಾಗಿದೆ . ಆದರೆ ಈ ಸುಳ್ಳು ಆರೋಪದ ಬಗ್ಗೆ ಸತ್ಯಾಸತ್ಯತೆ ನಡೆದು ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಿ ತಪ್ಪಿತತ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವವರೆಗೆ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

ಇದಕ್ಕೆ  ಪೂರಕವಾಗಿ ಮಾತನಾಡಿದ  ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ಆಶಾ ಕಾರ್ಯಕರತೆ  ಜಯಶ್ರೀ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ  ಎಂಬ ಕಪೋಕಲ್ಪಿತ ದೂರನ್ನು ಆಧರಿಸಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಜಯಶ್ರೀಯವರ ವಿರುದ್ದ ನಿರ್ಣಯ ಬರೆದಿದ್ದು ಇದೊಂದು ವ್ಯವಸ್ಥಿತ ಸಂಚಿನ ಭಾಗವಾಗಿದೆ. ದೂರಿನ ಬಗ್ಗೆ ಜಯಶ್ರೀ ಅವರಿಗೆ ನೋಟಿಸು ನೀಡಲಿಲ್ಲ.  ಈ ಎಲ್ಲಾ ಘಟನೆಗಳಲ್ಲಿ ಪಂಚಾಯತ್ ಅಧ್ಯಕ್ಷರು ಕಾನೂನು ಮೀರಿ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಸತ್ಯಾಂಶ ತಿಳಿಯದೆ ನಿರ್ಣಯಕ್ಕೆ ಸಹಿ ಮಾಡಿರುವುದು ಅವರ ಬೇಜವಾಬ್ದಾರಿಯಾಗಿದೆ. ಈ ಬಗ್ಗೆ ತಾ.ಪಂ. ಮುಖ್ಯ  ಕಾರ್ಯನಿರ್ವಾಹಣಾಧಿಕಾರಿಯವರಿಗೆ ದೂರು ನೀಡಲಾಗಿದೆ ಎಂದು ಹೇಳಿದ ಅವರು ಕುಟ್ರುಪಾಡಿ ಗ್ರಾಮ ಪಂಚಾಯತ್ ಮಾಡಿದ ನಿರ್ಣಯವನ್ನು ರದ್ದುಗೊಳಿಸದಿದ್ದರೆ ಪಂಚಾಯತ್ ಎದುರು ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.


ಕಡಬ ಟೈಮ್ಸ್ ಸುದ್ದಿ ಹಂಚಿರಿ